ಕುಂದಾಪುರ

 ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಕೇಂದ್ರ. ಕರ್ಣಾಟಕದ ಪಶ್ಚಿಮ ಕರಾವಳಿಯಲ್ಲಿದೆ. ವಾರ್ಷಿಕ ಸರಾಸರಿ ಮಳೆ 142.14". ಮುಂಗಾರು ಮಾರುತಗಳ ಪ್ರಭಾವದಿಂದ ವಿಶೇಷ ಮಳೆಯಾಗುತ್ತದೆ. ಎತ್ತರ ಪ್ರದೇಶದಲ್ಲಿರುವ ದಟ್ಟವಾದ ಕಾಡುಗಳಲ್ಲಿ ತೇಗ, ಹೊನ್ನೆ, ಬೀಟೆ, ಕರಿ ಮರ, ಬೆಳನಂದಿ, ಮತ್ತಿ, ಹಲಸು ಮುಂತಾದ ಮರಗಳಿವೆ. ತಾಲ್ಲೂಕಿನ ಕೇಂದ್ರವಾದ ಕುಂದಾಪುರದಲ್ಲಿ ನಾಲ್ಕು ಮತ್ತು ಬಸ್ತೂರಿನಲ್ಲಿ ಎರಡು ಮರಕೊಯ್ಯುವ ಕಾರ್ಖಾನೆಗಳಿವೆ.

 ಭೂಮಿ ಫಲವತ್ತಾಗಿದೆ. ಜನರ ಮುಖ್ಯ ವೃತ್ತಿ ಕೃಷಿ. ಬೇಸಾಯಕ್ಕೆ ಮಳೆಯ ನೀರೇ ಆಧಾರ. ನೀರಾವರಿಗಾಗಿ ಅಲ್ಲಲ್ಲಿ ನದಿಗಳಿಗೆ ಸಣ್ಣ ಅಣೆಕಟ್ಟುಗಳನ್ನು ಕಟ್ಟಲಾಗಿದೆ. ತಾಲ್ಲೂಕಿನಲ್ಲಿ ಬೆಳೆಯುವ ಮುಖ್ಯ ಆಹಾರ ಬೆಳೆಗಳು ಬತ್ತ ಮತ್ತು ರಾಗಿ, ಉದ್ದು, ಹೆಸರು, ಹುರುಳಿ, ಅವರೆ, ಅಡಕೆ, ತೆಂಗು, ಬಾಳೆ, ಕಬ್ಬು, ಗೇರುಬೀಜ, ಮೆಣಸು ಮತ್ತು ಗೆಣಸು ಇತರ ಬೆಳೆಗಳು. ಬುಟ್ಟಿ ಮತ್ತು ಚಾಪೆಗಳನ್ನು ಹೆಣೆಯುವುದು, ಬೆತ್ತದ ಕೆಲಸ, ನೆಯ್ಗೆ, ಚರ್ಮದ ಸಾಮಾನು, ಕೊಬ್ಬರಿ ಎಣ್ಣೆ ಮತ್ತು ಹೆಂಚು ತಯಾರಿಕೆ ಮೀನುಗಾರಿಕೆ-ಇವು ಇಲ್ಲಿಯ ಮುಖ್ಯ ಉದ್ಯೋಗಗಳು. ಹೆಂಚು, ಬೆಲ್ಲ, ತೆಂಗಿನಕಾಯಿ ಮತ್ತು ಮಡಕೆ ಇವು ತಾಲ್ಲೂಕಿನಿಂದ ಹೊರಗೆ ವ್ಯಾಪಾರವಾಗುವ ವಸ್ತುಗಳು. ತಾಲ್ಲೂಕಿನ ಒಟ್ಟು ಜನಸಂಖ್ಯೆ 3,77,372 (2001).

 ಈ ತಾಲ್ಲೂಕಿನಲ್ಲಿ ಒಂದು ಕಾಲೇಜು, ಹನ್ನೊಂದು ಪ್ರೌಢಶಾಲೆಗಳು ಮತ್ತು 330 ಇತರ ಶಾಲೆಗಳು ಇವೆ. ಈ ತಾಲ್ಲೂಕು ರಾಷ್ಟ್ರೀಯ ವಿಸ್ತರಣ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದೆ. ಗ್ರಾಮ ಪ್ರದೇಶಗಳು ಅಭಿವೃದ್ಧಿ ಹೊಂದುತ್ತಿವೆ. ಈ ಯೋಜನೆಯ ಆಶ್ರಯದಲ್ಲಿ ವಯಸ್ಕರ ಶಿಕ್ಷಣವೂ ನಡೆಯುತ್ತಿದೆ.

 ತಾಲ್ಲೂಕಿನ ಕೇಂದ್ರವಾದ ಪಟ್ಟಣ ಒಂದು ಬಂದರು ಮತ್ತು ಮುಖ್ಯ ವ್ಯಾಪಾರ ಕೇಂದ್ರ. ಹಾಲಾಡಿ (ಗರ್ಗತ), ಚಕ್ರ, ಕೊಲ್ಲೂರು, ಜಿಂಬೂ ಮತ್ತು ಸೂಕ್ತಿಮತಿಗಳೆಂಬ ಐದು ನದಿಗಳು ಸಂಗಮವಾಗಿ ನಿರ್ಮಾಣವಾದ ವಿಶಾಲವಾದ ಪಂಚಗಂಗಾವಳಿ (ಗಂಗೊಳ್ಳಿ) ನದೀ ಅಳಿವೆಯ ದಕ್ಷಿಣಕ್ಕೆ ಸಮತಟ್ಟಾದ ಪ್ರದೇಶದಲ್ಲಿದೆ. ಪಂಚ ಗಂಗಾವಳಿಯ ಅಳಿವೆಯ ಉತ್ತರ ತೀರದಲ್ಲಿರುವ ಗಂಗೊಳ್ಳಿ ಹಿಂದಿನ ಕಾಲದಿಂದಲೂ ಬಳಕೆಯಲ್ಲಿದ್ದ ಬಂದರು. ಅಳಿವೆಯಿಂದ 5 ಕಿಮೀ. ದೂರದೊಳಗೆ ನದಿಯಲ್ಲಿ ಹಲವು ಚಿಕ್ಕ ಫಲವತ್ತಾದ ಕುದುರೆಗಳು (ದ್ವೀಪಗಳು) ಇವೆ. ಅವುಗಳಲ್ಲಿ ಉಪ್ಪಿನ ಕುದುರು, ಹಿರಿ (ಹೇರಿ) ಕುದುರು ಮತ್ತು ಹಟ್ಟಿ ಕುದುರು ಮುಖ್ಯವಾದವು. ಈ ಪಟ್ಟಣದ ಜನಸಂಖ್ಯೆ 28,595 (2001). 

 ಕುಂದವರ್ಮನೆಂಬ ಅರಸ ಪಂಚಗಂಗಾವಳಿಯ ಹತ್ತಿರ ಕಟ್ಟಿಸಿದ ಕುಂದೇಶ್ವರ ದೇವಾಲಯದಿಂದ ಇದಕ್ಕೆ ಕುಂದಾಪುರವೆಂಬ ಹೆಸರಾಯಿತೆಂದು ಪ್ರತೀತಿ. ಈ ದೇವಾಲಯದಲ್ಲಿ ಆಳುಪರ ಕಾಲದ ಶಿಲಾಶಾಸನಗಳಿವೆ. ವಿಜಯನಗರ ಸಾಮ್ರಾಜ್ಯನಾಶವಾದ ಮೇಲೆ. ಈ ಜಿಲ್ಲೆಯನ್ನಾಳಿದ ಇಕ್ಕೇರಿ ನಾಯಕರ ಕಾಲದಲ್ಲಿ, ಪೋರ್ಚುಗೀಸರು ಇಲ್ಲಿ ಕಟ್ಟಿಸಿದ ಕೋಟೆ ಈಗಲೂ ಇದೆ. ಆಮೇಲೆ ಆಳಿದ ಹೈದರ್ ಆಲಿ ಇಲ್ಲಿ ರಚಿಸಿದ ಕೊತ್ತಳದ ಮೇಲೆ ಈಗ ಸರ್ಕಾರಿ ಆಡಳಿತ ಕಚೇರಿಗಳೀವೆ. ಟಿಪ್ಪುವಿನ ಕಾಲದಲ್ಲಿ ಗಂಗೊಳ್ಳಿ ಹಡಗು ಕಟ್ಟುವ ಒಂದು ಮುಖ್ಯ ಕೇಂದ್ರವಾಗಿತ್ತು. ಅವನನ್ನು ಸೋಲಿಸಲು ಮುಂಬಯಿಯಿಂದ ಕಳುಹಿಸಲಾದ ಇಂಗ್ಲಿಷ್ ಸೈನ್ಯ ಕುಂದಾಪುರದಲ್ಲಿಳಿದು, ಅನಂತರ 45 ಕಿಮೀ. ದೂರದ ಹೊಸಂಗಡಿ ಘಾಟಿಯ ದಾರಿಯಾಗಿ ಬಿದನೂರಿಗೆ ಸಾಗಿತ್ತು. ಈಗ ಈ ಘಾಟಿ ಮೋಟರ್ ವಾಹನಗಳ ಸಂಚಾರ ಮಾರ್ಗವಾಗಿ ಉಪಯೋಗದಲ್ಲಿದೆ.

 ಪಶ್ಚಿಮ ಕರಾವಳಿಯ ಹೆದ್ದಾರಿ ನಿರ್ಮಾಣದ ಅಂಗವಾಗಿ ಗಂಗಾವಳಿಗೆ ಹಾಕಲಾದ ಹೊಸ ಮಾದರಿಯ ಸೇತುವೆಗಳಿಂದ ಕುಂದಾಪುರದ ದಕ್ಷಿಣೋತ್ತರ ಭಾಗಗಳಿಗೆ ನೇರ ಸಂಚಾರ ಸಂಪರ್ಕವುಂಟಾಗಿದೆ. ಕುಂದಾಪುರ ಹೆಂಚು ಮತ್ತು ಕೆಲವು ಚಿಕ್ಕ ಕೈಗಾರಿಕೆಗಳ ಕೇಂದ್ರವಾಗಿಯೂ ಹೆಸರಾಗಿದೆ. ಇಲ್ಲಿ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜೊಂದಿದೆ. ಕುಂದಾಪುರದಲ್ಲಿ ಪ್ರತಿ ಶನಿವಾರ ನಡೆಯುವ ಸಂತೆ ಈ ಭಾಗದಲ್ಲೆಲ್ಲ ಪ್ರಸಿದ್ಧವಾದ್ದು.

 ಕೊಡಚಾದ್ರಿ ವಲಯದ ಕಬ್ಬಿಣದ ಅದುರಿನ ಸ್ವಲ್ಪ ಭಾಗ ಗಂಗೊಳ್ಳಿ ಬಂದರಿನ ಮೂಲಕ ರಫ್ತಾಗುತ್ತದೆ. ಇದನ್ನು ಅಧಿಕಗೊಳಿಸುವ ದೃಷ್ಟಿಯಿಂದ ಕೊಡಚಾದ್ರಿಯಿಂದ ಗಂಗೊಳ್ಳಿಗೆ ಅದುರು ರವಾನೆಗಾಗಿ ಒಂದು ಸಾರಿಗೆ ದಾರಿಯನ್ನು ರಚಿಸುವ ಸಾಧ್ಯತೆ ಪರಿಶೀಲನೆಯಲ್ಲಿದೆ.

 ಕುಂದಾಪುರದಿಂದ 6 ಕಿಮೀ. ದೂರಕ್ಕೆ ಪೂರ್ವದಲ್ಲಿರುವ ಬಸರೂರು ಒಂದು ಚಾರಿತ್ರಿಕ ಸ್ಥಳ.

 ಯಕ್ಷಗಾನ, ನಾಟಕ ಮತ್ತು ಕುಣಿತ ಈ ತಾಲ್ಲೂಜಿನ ಮುಖ್ಯ ಕಲೆಗಳು. ಗ್ರಾಮಪ್ರದೇಶದಲ್ಲಿ ಕಂಬಳ ಮತ್ತು ಕೋಳಿಕಾಳೆಗ ಜನಪ್ರಿಯವಾಗಿವೆ.

(ಎಂ.ವಿ.; ಎಂ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ